ರಾಜಶೇಖರ ಬೋಸ್
1880-1967. ಪ್ರಸಿದ್ಧ ಬಂಗಾಲಿ ಸಾಹಿತಿ. ಬಂಗಾಲಿ ಭಾಷೆಯ ಸಣ್ಣಕತೆಗಳ ಕ್ಷೇತ್ರದಲ್ಲಿ ಇವರದು ದೊಡ್ಡ ಹೆಸರು. ಪರಶುರಾಮ್ ಎಂಬುದು ಇವರ ಕಾವ್ಯನಾಮ. ಇವರು ಬದ್ರ್ವಾನ್ ಜಿಲ್ಲೆಯ ಬ್ರಹ್ಮನ್‍ಪಾರ ಎಂಬಲ್ಲಿ 1880ರ ಮಾರ್ಚ್ 16ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಬಂಗಾಲಿಯಲ್ಲೇ ನಡೆಯಿತು. ಕಲ್ಕತ್ತ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನೂ ಡಿ. ಲಿಟ್. ಪದವಿಯನ್ನೂ ಪಡೆದರು. ಬೆಂಗಾಲ್ ಕೆಮಿಕಲ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗ.

ಬೋಸರು ಬಂಗಾಲಿ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಪಡೆದಿದ್ದರು. ಸಂಸ್ಕøತದಿಂದ ಬಂಗಾಲಿಗೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಇಂಗ್ಲಿಷ್‍ನಲ್ಲಿಯೂ ಅನೇಕ ಬರೆಹಗಳನ್ನು ಹೊರತಂದಿದ್ದಾರೆ. ಇವರು ಹದಿನಾಲ್ಕಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಗದ್ದಾಲಿಕಾ (1924), ಭಾರತೀರ್ ಖನಿಜ (1943), ಆನಂದಿಬಾಯಿ ಇತ್ಯಾದಿ; ಗಲ್ಪ (1958) - ಇವು ಸಣ್ಣಕತೆಗಳ ಸಂಕಲನಗಳು. ಆನಂದಿಬಾಯಿ ಇತ್ಯಾದಿ ಗಲ್ಪ ಎಂಬ ಸಣ್ಣಕತೆಗಳ ಸಂಕಲನಕ್ಕೆ 1958 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇವರ ಅನುವಾದಗಳಲ್ಲಿ ವಾಲ್ಮೀಕಿ ರಾಮಾಯಣ (1946) ಮತ್ತು ವ್ಯಾಸಮಹಾಭಾರತ (1948) ಮುಖ್ಯವಾದವು.   								    
(ಎಸ್.ಆರ್.ಐ.ಬಿ.)

	ಇವರ ಮೊದಲನೆಯ ಹಾಸ್ಯ ಸಣ್ಣಕಥೆ ಶ್ರೀ ಶ್ರೀ ಸಿದ್ಧೇಶ್ವರ ಲಿಮಿಟೆಡ್. ಈ ಕಥೆಯಲ್ಲಿ 1920 ರ ದಶಕದ ಸುಳ್ಳು ಕಂಪೆನಿಗಳ ಮೋಸವನ್ನು ಹಾಸ್ಯದ ದಾಟಿಯಲ್ಲಿ ಬಯಲಿಗೆಳೆದರು. ಇದು ಜನಪ್ರಿಯವಾಯಿತು. ಇವರ ಮುಂದೆ ಅವರು ಪರಶುರಾಮ ಎನ್ನುವ ಕಾವ್ಯ ನಾಮದಲ್ಲಿ ಅರವತ್ತು ವರ್ಷಗಳಿಗೂ ಹೆಚ್ಚುಕಾಲ ಸಾಹಿತ್ಯ ರಚನೆ ಮಾಡಿದರು. 1920,30 ರ ದಶಕಗಳ ಬಂಗಾಳದ ವಿದ್ಯಾವಂತ ಯುವಜನತೆಯನ್ನು ಹಾಸ್ಯ ಸಹಾನುಭೂತಿಗಳೊಂದಿಗೆ ಚಿತ್ರಿಸಿದರು. ಸೋಗಿನ ಧಾರ್ಮಿಕ ವ್ಯಕ್ತಿಗಳನ್ನು ಹಾಸ್ಯ ಮಾಡಿದರು. ರಾಮಾಯಣ, ಮಹಾಭಾರತಗಳಿಂದ ಕೆಲವು ಪ್ರಸಂಗಗಳನ್ನು ಆಯ್ದು ಗಾಂಭೀರ್ಯ ಹಾಸ್ಯಗಳು ಬೆರೆತ ಧಾಟಿಯಲ್ಲಿ ನಿರೂಪಿಸಿದರು; ಈ ಬರಹಗಳು ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದವು. ವೈಜ್ಞಾನಿಕ ಮನೋಧರ್ಮ, ತರ್ಕಬದ್ಧ ವಿಚಾರಸರಣಿ ಮತ್ತು ಭಾಷೆಯ ಬಳಕೆಯಲ್ಲಿ ಖಚಿತತೆ ಇವರ ಸಾಹಿತ್ಯದ ಲಕ್ಷಣಗಳು.

	ರಾಜಶೇಖರ ಬೋಸರಿಗೆ 1955 ರಲ್ಲಿ ರಬೀಂದ್ರ ಪುರಸ್ಕಾರ ನೀಡಲಾಯಿತು.
	ಪರಿಷ್ಕರಣೆ
	ಪ್ರೊ. ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ